top of page
  • Writer's pictureDoubleClickMedia

ಜಾತಿ ನಿಂದನೆ ವಿವಾದ: ಎಫ್ಐಆರ್​ ರದ್ದು ಕೋರಿ ಹೈಕೋರ್ಟ್ ಮೊರೆಹೋದ ನಟ ಉಪೇಂದ್ರ


actor upendhra

ಬೆಂಗಳೂರು, ಆ. 14: ನಟ ಉಪೇಂದ್ರ ಅವರು ತಮ್ಮ ಪ್ರಜಾಕೀಯ ಪಕ್ಷದ ಕುರಿತು ಫೇಸ್‌ಬುಕ್‌ ಲೈವ್‌ನಲ್ಲಿ ಮಾತನಾಡುವಾಗ ಆಕ್ಷೇಪಾರ್ಹ ಪದ ಬಳಸಿದ್ದರು. ಅದೀಗ ವಿವಾದದ ಸ್ವರೂಪ ಪಡೆದುಕೊಂಡಿದ್ದು, ಉಪೇಂದ್ರ ವಿರುದ್ಧ ಈಗಾಗಲೇ ದೂರು ದಾಖಲಾಗಿದೆ. ಅಲ್ಲದೆ, ಇಂದು ಉಪೇಂದ್ರ ಅವರಿಗೆ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ನೋಟಿಸ್ ನೀಡಿ, ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ. ಈ ಮಧ್ಯೆ ಎಫ್ಐಆರ್ ರದ್ದು ಕೋರಿ ಉಪೇಂದ್ರ ಹೈಕೋರ್ಟ್ ಮೊರೆ ಹೋಗಿದ್ದಾರೆ.‘ಯಾವುದೇ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿಲ್ಲ. ಒಳ್ಳೆಯದನ್ನು ಮಾಡುವಾಗಲೂ ಟೀಕಿಸುವವರು ಇದ್ದೇ ಇರುತ್ತಾರೆ. ಈ ಮಾತಿಗೆ ಪೂರಕವಾಗಿ ಮಾತ್ರವೇ ಗಾದೆ ಬಳಸಲಾಗಿದೆ. ಆಕ್ಷೇಪ ವ್ಯಕ್ತವಾದ ಕೂಡಲೇ ಡಿಲೀಟ್ ಮಾಡಿ ಕ್ಷಮೆ ಕೋರಿದ್ದೇನೆ. ಹಳೆಯ ಗಾದೆ ಮಾತನ್ನು ಉಲ್ಲೇಖಿಸಿದ್ದು ಜಾತಿನಿಂದನೆಯಲ್ಲ. ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಅಪರಾಧ ಎಸಗಿಲ್ಲ. ಸಮಾಜದಲ್ಲಿನ ತಾರತಮ್ಯದ ವಿರುದ್ಧ ನಾನು ಹೋರಾಡುತ್ತಿದ್ದೇನೆ’ ಎಂದು ಉಪೇಂದ್ರ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.‘ಉಪೇಂದ್ರ ಅವರು ಜಾತಿ, ಸಮುದಾಯಗಳ ನಡುವೆ ಸಾಮರಸ್ಯಕ್ಕೆ ಯತ್ನಿಸುತ್ತಿದ್ದಾರೆ. ಪ್ರಚಾರ ಪಡೆಯಲೆಂದು ನನ್ನ ವಿರುದ್ಧ ದೂರು ದಾಖಲಿಸಲಾಗಿದೆ. ವಾಟ್ಸಾಪ್​​​ ಮೂಲಕ ಪೊಲೀಸರು ನೋಟಿಸ್ ಕಳುಹಿಸಿದ್ದಾರೆ. ಪೊಲೀಸರು ಉಪೇಂದ್ರಗೆ ಕಿರುಕುಳ ನೀಡಲು ಬಯಸಿದ್ದಾರೆ. ಹೀಗಾಗಿ ಎಫ್‌ಐಆರ್​​​​ಗಳಿಗೆ ತಡೆಯಾಜ್ಞೆ ನೀಡಬೇಕು’ ಎಂದು ಉಪೇಂದ್ರ ಹೈಕೋರ್ಟ್​ನಲ್ಲಿ ಮನವಿ ಮಾಡಿಕೊಂಡಿದ್ದಾರೆ.ಆರನೇ ವರ್ಷದ ‘ಪ್ರಜಾಕೀಯ ದಿನ’ದ ಪ್ರಯುಕ್ತ ಆಗಸ್ಟ್ 12ರಂದು ಫೇಸ್‌ಬುಕ್‌ ಲೈವ್‌ನಲ್ಲಿ ಮಾತನಾಡುತ್ತಿದ್ದ ಉಪೇಂದ್ರ ಮಾತಿನ ಭರದಲ್ಲಿ 'ಊರೆಂದರೆ.. (ಹೊಲೆಗೇರಿ) ಇರುತ್ತೆ' ಎಂದಿದ್ದರು. ಈ ಹೇಳಿಕೆ ವಿವಾದಕ್ಕೆ ಗುರಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ, ಆಕ್ರೋಶ ವ್ಯಕ್ತವಾಗಿತ್ತು. ದಲಿತರ ಭಾವನೆಗಳಿಗೆ ಧಕ್ಕೆ ತಂದಿರುವ ನಟ ಉಪೇಂದ್ರ ವಿರುದ್ಧ ಕ್ರಮ ಜರುಗಿಸಬೇಕು ಎಂಬ ಒತ್ತಾಯವೂ ಕೇಳಿ ಬಂದಿತ್ತು. ಜತೆಗೆ, ಸಮತಾ ಸೈನಿಕ ದಳದ ಜಿ ಗೋಪಾಲ್‌, ಗಿರಿಯಪ್ಪ ಅವರು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೆ ಎನ್‌ ಮಧುಸೂದನ್‌ ಅವರಿಗೆ ಲಿಖಿತ ದೂರು ನೀಡಿದ್ದರು.ತಮ್ಮ ಹೇಳಿಕೆ ಕುರಿತು ವ್ಯಾಪಕ ಟೀಕೆ ವ್ಯಕ್ತವಾದ ಬೆನ್ನಲ್ಲೇ ನಟ ಉಪೇಂದ್ರ ಕ್ಷಮೆ ಕೋರಿದ್ದು, ವಿಡಿಯೋ ಡಿಲೀಟ್‌ ಮಾಡಿದ್ದಾರೆ. 'ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂ ನೇರಪ್ರಸಾರದಲ್ಲಿ ಬಾಯಿತಪ್ಪಿ ಒಂದು ಗಾದೆ ಮಾತು ಬಳಸಿದ್ದು, ಅದರಿಂದ ಹಲವರ ಭಾವನೆಗಳಿಗೆ ಧಕ್ಕೆ ಉಂಟಾಗಿರುವುದು ಕಂಡು ಬಂದಿದೆ. ಹೀಗಾಗಿ, ತಕ್ಷಣ ಲೈವ್‌ ವಿಡಿಯೊ ಡಿಲೀಟ್‌ ಮಾಡಿರುತ್ತೇನೆ. ನನ್ನ ಮಾತಿಗೆ ಕ್ಷಮೆ ಇರಲಿ' ಎಂದು ಉಪೇಂದ್ರ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದರು.

Comments


bottom of page