DoubleClickMedia
ಬಿಟ್ ಕಾಯಿನ್ ಹಗರಣ ಮರು ತನಿಖೆಗೆ ಆದೇಶಿಸಿದ ಕಾಂಗ್ರೆಸ್ ಸರ್ಕಾರ

ಬೆಂಗಳೂರು ಜು.3 : ಹಿಂದಿನ ಬಿಜೆಪಿ ಸರ್ಕಾರ ಅವಧಿಯಲ್ಲಿ ನಡೆದಿದ್ದ ಬಿಟ್ ಕಾಯಿನ್ ಹಗರಣ ಪ್ರಕರಣವನ್ನು ಮರು ತನಿಖೆಗೆ ಸಿದ್ದರಾಮಯ್ಯ ಸರ್ಕಾರ ಆದೇಶಿಸಿದೆ. ಕಾಟನ್ ಪೇಟೆ ಬಿಟ್ ಕಾಯಿನ್ ಪ್ರಕರಣವನ್ನು ಮರುತನಿಖೆಗೆ ಸಿಐಡಿಗೆ ವರ್ಗಾವಣೆ ಮಾಡಿ ಇಂದು(ಜುಲೈ 03) ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಬಿಟ್ ಕಾಯಿನ್ ಕೇಸ್ ತನಿಖೆಗೆ ಎಸ್ಐಟಿ ರಚನೆ ಮಾಡಿದ್ದು, ಸಿಐಡಿ ಎಡಿಜಿಪಿ ಮನೀಷ್ ಕರ್ಬೀಕರ್ ನೇತೃತ್ವದಲ್ಲಿ ತನಿಖೆ ನಡೆಸಲು ತಯಾರಿ ನಡೆದಿದೆ. ಈ ಎಸ್ಐಟಿ ತಂಡದಲ್ಲಿ ಡಿಐಜಿ ವಂಶಿಕೃಷ್ಣ, ಡಿಸಿಪಿ ಅನೂಪ್ ಶೆಟ್ಟಿ, ಸಿಐಡಿ ಎಸ್ಪಿ ಶರತ್ ಇದ್ದಾರೆ. ಬೆಂಗಳೂರು ಸಿಸಿಬಿ ತನಿಖೆ ನಡೆಸಿದ್ದ ಕೇಸಿನ ಮರುತನಿಖೆಗೆ ಆದೇಶ ಹೊರಬಿದ್ದಿದೆ. ಬಿಟ್ ಕಾಯಿನ್ ಪ್ರಕರಣ ಸಂಬಂಧಿಸಿದಂತೆ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
2020ರಲ್ಲಿ ಕೆಂಪೇಗೌಡ ನಗರ ಸಮೀಪ ಡ್ರಗ್ ಮಾರಾಟಕ್ಕೆ ಯತ್ನಿಸಿದ್ದಾಗ ಶ್ರೀಕಿ ಹಾಗೂ ಆತನ ಸ್ನೇಹಿತರು ಸಿಸಿಬಿ ಬಲೆಗೆ ಬಿದ್ದಿದ್ದರು. ಬಳಿಕ ವಿಚಾರಣೆ ವೇಳೆ ಅಂತಾರಾಷ್ಟ್ರೀಯ ಮಟ್ಟದ ಆನ್‌ಲೈನ್ ಗೇಮಿಂಗ್ ಕಂಪನಿಗಳು ಹಾಗೂ ಸರ್ಕಾರದ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿ ಸುಮಾರು 11 ಕೋಟಿ ರು. ಹಣವನ್ನು ಶ್ರೀಕಿ ದೋಚಿದ್ದ ಸಂಗತಿ ಬಯಲಾಗಿತ್ತು. ಹೀಗೆ ದೋಚಿದ್ದ ಹಣವನ್ನು ಬಿಟ್ ಕಾಯಿನ್‌ಗಳಾಗಿ ಪರಿವರ್ತಿಸಿ ಡ್ರಗ್ ದಂಧೆಗೆ ಶ್ರೀಕಿ ಬಳಸಿದ್ದ ಎನ್ನಲಾಗಿತ್ತು.
ಬಿಟ್ ಕಾಯಿನ್ ಪ್ರಕರಣದಲ್ಲಿ ಭಾರಿ ಅವ್ಯವಹಾರ ನಡೆದಿದೆ. ಹ್ಯಾಕರ್ ಶ್ರೀಕಿಯನ್ನು ಬಳಸಿಕೊಂಡು ಆಡಳಿತ ಪಕ್ಷದವರು ದೊಡ್ಡ ಮೊತ್ತದ ಹಣ ಲಪಟಾಯಿಸಿದ್ದಾರೆ ಎಂದು ಆಗಿನ ಕಾಂಗ್ರೆಸ್ ಪಕ್ಷದ ನಾಯಕರು ಆರೋಪಿಸಿದ್ದರು. ಅಲ್ಲದೆ ತಮ್ಮ ಸರ್ಕಾರ ಆಡಳಿತಕ್ಕೆ ಬಂದರೆ ಬಿಟ್ ಕಾಯಿನ್ ಹಗರಣದ ತನಿಖೆ ನಡೆಸುವುದಾಗಿ ಸಹ ಕಾಂಗ್ರೆಸ್ ಪಕ್ಷ ಹೇಳಿತ್ತು.