DoubleClickMedia
ಪ್ರಧಾನಿ ಮೋದಿಗೆ ತನ್ನ ಅತ್ಯುನ್ನತ 'ಆರ್ಡರ್ ಆಫ್ ದಿ ನೈಲ್' ಪ್ರಶಸ್ತಿ ಪ್ರದಾನ ಮಾಡಿದ ಈಜಿಪ್ಟ್

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈಜಿಪ್ಟ್‌ನ ಅತ್ಯುನ್ನತ ರಾಜ್ಯ ಗೌರವವಾದ ʼಆರ್ಡರ್ ಆಫ್ ದಿ ನೈಲ್’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್ ಸಿಸಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಭಾನುವಾರ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಜಗತ್ತಿನ ವಿವಿಧ ದೇಶಗಳು ಪ್ರಧಾನಿ ಮೋದಿಯವರಿಗೆ ನೀಡುತ್ತಿರುವ 13ನೇ ಅತ್ಯುನ್ನತ ರಾಜ್ಯ ಗೌರವ ಇದಾಗಿದೆ.
26 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಇದೇ ಮೊದಲ ಬಾರಿಗೆ ಈಜಿಪ್ಟ್‌ಗೆ ಭೇಟಿ ನೀಡಿದ್ದಾರೆ. ಭಾನುವಾರ ಮುಂಜಾನೆ ಮೋದಿ ಅವರು ಈಜಿಪ್ಟ್‌ನ 11ನೇ ಶತಮಾನದ ಐತಿಹಾಸಿಕ ಅಲ್-ಹಕೀಮ್ ಮಸೀದಿ ಹಾಗೂ ಕೈರೋದಲ್ಲಿನ ಹೆಲಿಯೊಪೊಲಿಸ್ ಕಾಮನ್‌ವೆಲ್ತ್ ಯುದ್ಧಸ್ಮಾರಕಕ್ಕೆ ಭೇಟಿ ನೀಡಿದರು. ಈ ವೇಳೆ ಅವರು ಈಜಿಪ್ಟ್‌ನ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿ, ತಮ್ಮ ರಾಷ್ಟ್ರಕ್ಕೂ ಭೇಟಿ ನೀಡುವಂತೆ ಆಹ್ವಾನಿಸಿದರು.
ಆರ್ಡರ್ ಆಫ್ ದಿ ನೈಲ್‌ನ ವಿಶೇಷತೆ?
ನೈಲ್ ಎಂಬುದು ಈಜಿಪ್ಟ್‌ನ ಪ್ರಮುಖ ನದಿಯಾಗಿದೆ. ಭಾರತಕ್ಕೆ ಗಂಗಾ ನದಿಯಂತೆ ಈಜಿಪ್ಟ್‌ಗೆ ನೈಲ್ ನದಿ ಪ್ರಮುಖವಾದುದು. ಇದು ವಿಶ್ವದಲ್ಲೇ ಅತ್ಯಂತ ದೊಡ್ಡ ನದಿಯೂ ಆಗಿರುವುದರಿಂದ ಈಜಿಪ್ಟ್‌ನ ಅತ್ಯುನ್ನತ ಪ್ರಶಸ್ತಿಗೆ ನೈಲ್ ನದಿಯ ಹೆಸರು ಇಡಲಾಗಿದೆ.
ಈಜಿಪ್ಟ್‌ನ ಪ್ರೆಸಿಡೆನ್ಸಿಯ ವೆಬ್‌ಸೈಟ್ ಪ್ರಕಾರ ಆರ್ಡರ್ ಆಫ್ ದಿ ನೈಲ್ ಎಂಬುದು 3 ಚದರ ಯುನಿಟ್‌ಗಳನ್ನೊಳಗೊಂಡ ಶುದ್ಧ ಚಿನ್ನದ ಮಾಲೆಯಾಗಿದೆ. ಅದರ ಮೇಲೆ ಫರೋನಿಕ್ ಚಿಹ್ನೆಗಳಿವೆ. ಮೊದಲ ಯುನಿಟ್‌ನಲ್ಲಿ ದುಷ್ಟರ ವಿರುದ್ಧ ರಾಜ್ಯವನ್ನು ರಕ್ಷಿಸುವ ಕಲ್ಪನೆಯನ್ನು ಹೋಲುತ್ತದೆ. ಎರಡನೇ ಘಟಕದಲ್ಲಿ ನೈಲ್ ನದಿಯಿಂದಾದ ಸಮೃದ್ಧಿ ಹಾಗೂ ಸಂತೋಷವನ್ನು ಸೂಚಿಸುತ್ತದೆ ಮತ್ತು ಮೂರನೇ ಘಟಕದಲ್ಲಿ ಸಂಪತ್ತು ಹಾಗೂ ಸಹಿಷ್ಣುತೆಯನ್ನು ಸೂಚಿಸುತ್ತದೆ. ಅಮೂಲ್ಯ ಆಭರಣಗಳಿಂದ ಅಲಂಕರಿಸಲ್ಪಟ್ಟಿರುವ ವೃತ್ತಾಕಾರದ ಚಿನ್ನದ ಹೂವಿನ ಘಟಕಗಳು ಒಂದಕ್ಕೊಂದು ಬೆಸೆದುಕೊಂಡಿವೆ. ಮಾಲೆಯಲ್ಲಿ ಷಡ್ಭುಜಾಕೃತಿಯ ಪೆಂಡೆಂಟ್ ಇದ್ದು, ಅದನ್ನು ಫರೋನಿಕ್ ಶೈಲಿಯ ಹೂವುಗಳು ಹಾಗೂ ರತ್ನಗಳಿಂದ ಅಲಂಕರಿಸಲಾಗಿದೆ.