DoubleClickMedia
ಕೀಟನಾಶಕ ಸಿಂಪಡಿಸಿದ ನಂತರ ಕೈ ತೊಳೆಯಲು ಮರೆತು ಆಹಾರ ಸೇವನೆ: ಅರಣ್ಯಾಧಿಕಾರಿ ಮೃತ್ಯು

ಹುಬ್ಬಳ್ಳಿ, ಜು.9: ಕೀಟನಾಶಕ ಸಿಂಪಡಿಸಿದ ನಂತರ ಕೈ ತೊಳೆಯಲು ಮರೆತು ಆಹಾರ ಸೇವಿಸಿ ಅರಣ್ಯಾಧಿಕಾರಿಯೊಬ್ಬರು ಪ್ರಾಣ ಕಳೆದುಕೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಮೃತರನ್ನು ಕುಮಟಾ ತಾಲೂಕಿನ ಬಾಡ ಗ್ರಾಮದ ನಿವಾಸಿ ಯೋಗೇಶ್ ನಾಯಕ್ ಎಂದು ಗುರುತಿಸಲಾಗಿದೆ. ಯೋಗೇಶ್ ನಾಯಕ್ ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ಪೊಲೀಸ್ ಮೂಲಗಳ ಪ್ರಕಾರ, ವಿರ್ನೋಳಿ ವಿಭಾಗದ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ನಾಯಕ್ ಅವರು ಜೂನ್ 27 ರಂದು ತೇಗದ ತೋಟದಲ್ಲಿ ಕಳೆ ಮತ್ತು ಕೀಟಗಳನ್ನು ತೆರವುಗೊಳಿಸಲು ಕೀಟನಾಶಕ ಸಿಂಪಡಿಸಿದ್ದರು, ನಂತರ ಅವರು ಕೈ ತೊಳೆಯಲು ಮರೆತು ಮಧ್ಯಾಹ್ನದ ಊಟವನ್ನು ಸೇವಿಸಿದ್ದಾರೆ. ಮನೆಗೆ ಹಿಂದಿರುಗಿದ ಮರುದಿನ ಹೊಟ್ಟೆ ಉರಿ ಉಂಟಾಗಿದ್ದರಿಂದ ಖಾಸಗಿ ವೈದ್ಯರ ಬಳಿ ತೆರಳಿದ್ದಾರೆ. ವೈದ್ಯರು ಆಂಟಿಬಯೋಟಿಕ್ ನೀಡಿದ್ದು ರೋಗಲಕ್ಷಣಗಳು ಕಡಿಮೆಯಾಗದಿದ್ದಾಗ, ನಾಯಕ್ ಅವರನ್ನು ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲಿಸಲಾಯಿತು.
ತಪಾಸಣೆಯ ವೇಳೆ ಅವರ ದೇಹದ ಪ್ರಮುಖ ಅಂಗಗಳಾದ ಮೂತ್ರಪಿಂಡ, ಯಕೃತ್ತು ಮತ್ತು ಶ್ವಾಸಕೋಶಗಳಿಗೆ ಹಾನಿಯಾಗಿರುವುದು ಕಂಡುಬಂದಿದೆ. ನಂತರ ಅವರನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಆದರೆ ಆ ವೇಳೆಗೆ ನಾಯಕ್ ಕೋಮಾಗೆ ಜಾರಿದರು. ಕುಟುಂಬಸ್ಥರು ಅವರನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದರು. ಆದರೆ, ಜುಲೈ 7 ರಂದು ಅವರು ಮೃತಪಟ್ಟಿದ್ದಾರೆ. ಇವರು ಪತ್ನಿ ಮತ್ತು ಒಂದು ಮಗುವನ್ನು ಅಗಲಿದ್ದಾರೆ.