DoubleClickMedia
ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಮಾರ್ಗದಲ್ಲಿ ಗುಡ್ಡ ಕುಸಿತ: ಪ್ರವಾಸಿಗರಿಗೆ ನಿರ್ಬಂಧ

ಚಿಕ್ಕಮಗಳೂರು, ಜುಲೈ 25: ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಭಾರೀ ಮಳೆ ಹಿನ್ನೆಲೆ ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ಮಾರ್ಗದಲ್ಲಿ ಭಾರೀ ಗುಡ್ಡ ಕುಸಿದಿದೆ. ಹೀಗಾಗಿ ಮುಳ್ಳಯ್ಯನಗಿರಿ ಮಾರ್ಗದಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದ್ದು, ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.
ಮುಳ್ಳಯ್ಯನಗಿರಿ ರಸ್ತೆ ಮಾರ್ಗದಲ್ಲಿ ಹತ್ತಕ್ಕೂ ಅಧಿಕ ಕಡೆ ಗುಡ್ಡ ಕುಸಿದಿದ್ದು ರಸ್ತೆಗೆ ಅಡ್ಡಲಾಗಿ ಗುಡ್ಡದ ಮಣ್ಣು ಬೀಳುತ್ತಲೇ ಇದೆ. ಮುಂಜಾಗ್ರತಾ ಕ್ರಮವಾಗಿ ಬ್ಯಾರಿಕೇಡ್ ಹಾಕಿ ವಾಹನ ಸಂಚಾರ ಬಂದ್ ಮಾಡಲಾಗಿದೆ.
ಕಳೆದ ಮೂರು ದಿನಗಳಿಂದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕಳಸ, ಮೂಡಿಗೆರೆ, ಕೊಪ್ಪ, ಎನ್ಆರ್ ಪುರ ತಾಲೂಕಿನಾದ್ಯಂತ ವರುಣನ ಅರ್ಭಟ ಮುಂದುವರೆದಿದೆ. ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತುಂಗಾ, ಭದ್ರಾ, ಹೇಮಾವತಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಶೃಂಗೇರಿ ಶಾರದಾಂಬೆ ದೇವಾಲಯದ ಬಳಿ ತುಂಗಾ ನದಿ ನೆರೆ ಆತಂಕವನ್ನ ಸೃಷ್ಟಿ ಮಾಡಿದ್ದು ಕಪ್ಪೆ ಶಂಕರ ದೇವಾಲಯ ಸೇರಿದಂತೆ ಗುರು ನಿವಾಸಕ್ಕೆ ತೆರಳುವ ಮಾರ್ಗದಲ್ಲಿರುವ ತೆಂಗಿನ ತೋಟ ಸಂಪೂರ್ಣ ಜಲಾವೃತಗೊಂಡಿದೆ. ಸಂಧ್ಯಾ ವಂದನ ಮಂಟಪ ಮುಳುಗಡೆಯಾಗಿದೆ. ದೇವಾಲಯ ಪಕ್ಕದಲ್ಲಿರುವ ಪ್ಯಾರಲ್ ಮಾರ್ಗ ಗಾಂಧಿ ಮೈದಾನದಲ್ಲಿ ತುಂಗಾ ನದಿ ರಭಸವಾಗಿ ಹರಿಯುತ್ತಿದ್ದು ಮುಂಜಾಗ್ರತಾ ಕ್ರಮವಾಗಿ ದೇವಾಲಯ ಬಳಿ ಅಗ್ನಿಶಾಮಕ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ.