DoubleClickMedia
2019 ಕ್ಕಿಂತ ಮುಂಚಿನ ವಾಹನಗಳಿಗೆ ನಂಬರ್ ಪ್ಲೇಟ್ ಬದಲಿಸಲು ನ.17 ರವರೆಗೆ ಗಡುವು

ಬೆಂಗಳೂರು, ಆಗಸ್ಟ್ 23: ರಾಜ್ಯದಲ್ಲಿ ಏಪ್ರಿಲ್ 1, 2019 ರ ಮೊದಲು ನೋಂದಾಯಿಸಲಾದ ಎಲ್ಲಾ ವಾಹನಗಳು ಹೈ-ಸೆಕ್ಯುರಿಟಿ ನಂಬರ್ ಪ್ಲೇಟ್ (ಎಚ್‌ಎಸ್‌ಆರ್‌ಪಿ) ಆಳವಡಿಕೆ ಕಡ್ಡಾಯಗೊಳಿಸಲಾಗಿದ್ದು, ಇದಕ್ಕೆ ನವೆಂಬರ್ 17 ರವರೆಗೆ ಕಾಲಾವಕಾಶ ನೀಡಲಾಗಿದೆ. ನಿಗದಿತ ಗಡುವಿನೊಳಗೆ ಎಚ್‌ಎಸ್‌ಆರ್‌ಪಿ ಅಳವಡಿಸದ ವಾಹನಗಳ ಮಾಲೀಕರ ವಿರುದ್ಧ 500ರೂ.ವಿನಿಂದ 1 ಸಾವಿರ ರೂ.ವರೆಗೂ ದಂಡ ವಿಧಿಸುವ ಸಾಧ್ಯತೆ ಇದೆ ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.
ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಸುವಂತೆ ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯವು 2001ರಲ್ಲೇ ಆದೇಶ ಹೊರಡಿಸಿತ್ತು. ಆದರೆ, ಆಗ ಎಚ್‌ಎಸ್‌ಆರ್‌ಪಿ ಅಳವಡಿಕೆ ಕಡ್ಡಾಯಗೊಳಿಸಿರಲಿಲ್ಲ. ದೇಶದ ಭದ್ರತೆ ದೃಷ್ಟಿಯಿಂದ 2018 ರಲ್ಲಿ ಹೊಸ ಆದೇಶ ಹೊರಡಿಸಿದ ಕೇಂದ್ರ ಸರಕಾರ 2019ರ ಏ.1ರ ನಂತರ ನೋಂದಣಿಯಾಗುವ ಎಲ್ಲಾ ವಾಹನಗಳಿಗೂ ಕಡ್ಡಾಯವಾಗಿ ಎಚ್‌ಎಸ್‌ಆರ್‌ಪಿ ಅಳವಡಿಸಬೇಕೆಂದು ಸೂಚಿಸಿತ್ತು.
ಕೇಂದ್ರದ ಆದೇಶ ರಾಜ್ಯದಲ್ಲೂ ಜಾರಿಯಾಗಿದ್ದು, 2019ರ ಏ.1ರಿಂದ ಹೊಸ ವಾಹನಗಳಿಗೆ ಶೋ ರೂಂಗಳಲ್ಲೇ ಎಚ್‌ಎಸ್‌ಆರ್‌ಪಿ ಅಳವಡಿಸಲಾಗುತ್ತಿದೆ. ಅದಕ್ಕೂ ಮುನ್ನ ನೋಂದಣಿಯಾಗಿರುವ ವಾಹನಗಳಲ್ಲಿಇಂದಿಗೂ ಹಳೆ ನೋಂದಣಿ ಫಲಕಗಳೇ ಇವೆ. ರಾಜ್ಯದಲ್ಲಿ ಅಂತಹ ಸುಮಾರು 2 ಕೋಟಿ ವಾಹನಗಳಿವೆ. ಈ ಪೈಕಿ ಶೇ.70ರಷ್ಟು ದ್ವಿಚಕ್ರ ವಾಹನಗಳು, ಶೇ.20ರಷ್ಟು ಲಘು ವಾಹನಗಳು (ಎಲ್‌ಎಂವಿ) ಮತ್ತು ಶೇ.10ರಷ್ಟು ಸಾರಿಗೆ ವಾಹನಗಳೂ ಸೇರಿವೆ. ಇದೀಗ ಆ ಹಳೆ ವಾಹನಗಳ ನೋಂದಣಿ ಫಲಕಗಳನ್ನು ಬದಲಿಸಿ ಕಡ್ಡಾಯವಾಗಿ ಎಚ್‌ಎಸ್‌ಆರ್‌ಪಿ ಅಳವಡಿಸಬೇಕೆಂದು ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದೆ.
ಹಳೆಯ ವಾಹನಗಳ ಮಾಲೀಕರು ವಾಹನ ತಯಾರಕರ ಅಧಿಕೃತ ಡೀಲರ್‌ಗಳ ಮೂಲಕ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅನ್ನು ಆರ್ಡರ್ ಮಾಡಬಹುದು. ನಾಲ್ಕು ಚಕ್ರಗಳ ವಾಹನಕ್ಕೆ ಎಚ್‌ಎಸ್‌ಆರ್‌ಪಿ ಪ್ಲೇಟ್ ಬೆಲೆಯು ರೂ 400 ರಿಂದ ರೂ 500 ರವರೆಗೆ ಇರಲಿದೆ. ದ್ವಿಚಕ್ರ ವಾಹನಗಳಿಗೆ ರೂ 250 ರಿಂದ ರೂ 300 ರ ವರೆಗೆ ಇರಲಿದೆ. ದ್ವಿಚಕ್ರ ವಾಹನಗಳಿಗೆ ಈಗಾಗಲೇ 12 ರಾಜ್ಯಗಳು ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಿ ಈ ನಿಯಮವನ್ನು ಜಾರಿಗೆ ತರಲಾಗಿದೆ. ವಾಹನ ಉತ್ಪಾದಕ ಕಂಪೆನಿಗಳು ಎಚ್‌ಎಸ್‌ಆರ್‌ಪಿ ಪ್ಲೇಟ್‌ಗಳನ್ನು ವಾಹನ ಮಾರಾಟದ ಶೋ ರೂಂಗಳಿಗೆ ಪೂರೈಸಲು ಅಧಿಕೃತ ಎಚ್‌ಎಸ್‌ಆರ್‌ಪಿ ತಯಾರಕರೊಂದಿಗೆ ಒಪ್ಪಂದ ಮಾಡಿಕೊಂಡಿವೆ. ಹಳೆ ವಾಹನಗಳಿಗೂ ಸಹ ಅಧಿಕೃತ ಎಚ್‌ಎಸ್‌ಆರ್‌ಪಿ ತಯಾರಕರು ಪ್ಲೇಟ್‌ಗಳನ್ನು ಪೂರೈಸುತ್ತಾರೆ. ಬಳಿಕ ಶೋರೂಂಗಳಲ್ಲಿ ಹಳೆ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಪ್ಲೇಟ್ ಅಳವಡಿಸಲಾಗುತ್ತದೆ. ನಂತರ ಶೋರೂಂ ಸಿಬ್ಬಂದಿ ಅಥವಾ ವಾಹನ ತಯಾರಕ ಕಂಪೆನಿಯವರು ವಾಹನ್ ಪೋರ್ಟಲ್‌ನಲ್ಲಿ ಲೇಸರ್ ಕೋಡಿಂಗ್ ನವೀಕರಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.