DoubleClickMedia
ಕಡಬ ಯುವಕನ ಸಂಶಯಾಸ್ಪದ ಸಾವು: ಅಪಘಾತ ಕಾರಣ ಎಂದ ಪೋಲಿಸರು
ಕಡಬ, ಜೂ.24: ಇತ್ತೀಚೆಗೆ ಮರ್ದಾಳದಲ್ಲಿ ನೂತನ ಚಿನ್ನಾಭರಣ ಮಳಿಗೆ ಉದ್ಘಾಟನೆಯ ಸಿದ್ಧತೆಯಲ್ಲಿ ನಿರತರಾಗಿದ್ದ ನಾಗಪ್ರಸಾದ್ ಆಚಾರ್ಯ ಅವರ ಸಾವು ಅಪಘಾತದಿಂದ ಆಗಿದೆ ಎಂದು ಪೋಲಿಸರು ಸ್ಪಷ್ಟಪಡಿಸಿದ್ದಾರೆ.

ಜೂನ್ 22ರ ಮುಂಜಾನೆ ಕೆಂಪುಹೊಳೆ ಬಳಿಯ ಹೆದ್ದಾರಿಯಲ್ಲಿ ಜಖಂಗೊಂಡಿದ್ದ ತಮ್ಮ ಬೈಕಿನ ಪಕ್ಕದಲ್ಲಿ ನಾಗಪ್ರಸಾದ್ ಶವವಾಗಿ ಪತ್ತೆಯಾಗಿದ್ದರು. ಅವರ ಸಾವಿನ ಹಿಂದೆ ಅನೇಕ ಅನುಮಾನಗಳಿದ್ದವು. ಆದರೆ ಯಾವುದೋ ವಾಹನವನ್ನು ಓವರ್ ಟೇಕ್ ಮಾಡಲು ಯತ್ನಿಸಿದ ನಾಗಪ್ರಸಾದ್ ಬ್ಯಾಲೆನ್ಸ್ ಕಳೆದುಕೊಂಡು ರಸ್ತೆ ಬದಿಯ ಕಾಂಕ್ರೀಟ್ ಪಾದಚಾರಿ ಮಾರ್ಗಕ್ಕೆ ಡಿಕ್ಕಿ ಹೊಡೆದು ಚರಂಡಿಗೆ ಬಿದ್ದಿರಬೇಕು ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ನಾಗಪ್ರಸಾದ್ ಸಾವು ಅಪಘಾತದಿಂದ ಸಂಭವಿಸಿದೆ ಎಂದು ಪೊಲೀಸರು ಖಚಿತಪಡಿಸಿದ್ದರೂ, ಕೆಲವು ಅನುಮಾನಗಳು ಇನ್ನೂ ಸ್ಪಷ್ಟವಾಗಿಲ್ಲ. ತಮ್ಮ ಚಿನ್ನಾಭರಣ ಮಳಿಗೆಯ ಉದ್ಘಾಟನೆಯ ಕಾರ್ಯಕ್ರಮಕ್ಕೆ ಪರಿಚಿತರನ್ನು ಆಹ್ವಾನಿಸಲು ಇಚ್ಲಂಪಾಡಿಗೆ ಹೋಗಿದ್ದ ನಾಗಪ್ರಸಾದ್ ಸಕಲೇಶಪುರಕ್ಕೆ ಏಕೆ ಹೋದರು ಎಂಬುದು ಯಾರಿಗೂ ತಿಳಿದಿಲ್ಲ. ಮನೆಯಿಂದ ಎರಡು ಹೆಲ್ಮೆಟ್ ಕೊಂಡೊಯ್ದಿದ್ದು ಏಕೆ ಎಂಬುದು ಕೂಡ ಸ್ಪಷ್ಟವಾಗಿಲ್ಲ. ಅಪಘಾತದ ಸ್ಥಳದಿಂದ ಅವರ ಮೊಬೈಲ್ ಫೋನ್ ನಾಪತ್ತೆಯಾಗಿರುವುದು ಕೂಡ ನಿಗೂಢವಾಗಿದೆ. ನಾಗಪ್ರಸಾದ್ ಅವರ ಮೊಬೈಲ್ ಫೋನ್‌ನ ವಿವರವಾದ ಕಾಲ್ ಲಿಸ್ಟ್ ಪೊಲೀಸರಿಗೆ ಸಿಕ್ಕ ನಂತರವಷ್ಟೇ ಸ್ಪಷ್ಟ ಚಿತ್ರಣ ಹೊರಬೀಳಲಿದೆ.