DoubleClickMedia
ಬ್ಯಾಂಕಾಕ್‌ನಿಂದ ಬಂದವನ ಬ್ಯಾಗಲ್ಲಿತ್ತು ಹೆಬ್ಬಾವು, ಮೊಸಳೆ: ವಿಮಾನ ನಿಲ್ದಾಣದಲ್ಲಿ 234 ಪ್ರಾಣಿಗಳ ಜಪ್ತಿ

ಬೆಂಗಳೂರು ಆಗಸ್ಟ್ 23: ಅಪರೂಪದ ಕೆಲ ವನ್ಯಜೀವಿಗಳು, ಜಲಚರಗಳು ಹಾಗೂ ಸರಿಸೃಪಗಳನ್ನು ಟ್ರಾಲಿ ಬ್ಯಾಗ್‌ನಲ್ಲಿ ಬಚ್ಚಿಟ್ಟು ಕಳ್ಳ ಸಾಗಣೆ ಮಾಡುತ್ತಿದ್ದ ಪ್ರಯಾಣಿಕನೊಬ್ಬನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಎರಡು ಟ್ರಾಲಿ ಬ್ಯಾಗ್‌ಗಳಲ್ಲಿ ತರಲಾಗಿದ್ದ ಹೆಬ್ಬಾವು ಮರಿ, ಊಸರವಳ್ಳಿ, ಮೊಸಳೆ ಮರಿ, ಆಮೆಗಳು, ಮರಿ ಕಾಂಗರೂ ಸೇರಿದಂತೆ 234 ವನ್ಯಜೀವಿಗಳನ್ನು ರಕ್ಷಿಸಿದ್ದಾರೆ.
ಸೋಮವಾರ ರಾತ್ರಿ 10.30ಕ್ಕೆ ಬ್ಯಾಂಕಾಕ್‌ನಿಂದ ಎಫ್.ಡಿ-137 ಸಂಖ್ಯೆ ವಿಮಾನದಲ್ಲಿ ಬಂದಿದ್ದ ಪ್ರಯಾಣಿಕ ವಿವಿಧ ಪ್ರಾಣಿಗಳನ್ನು ಟ್ರ್ಯಾಲಿ ಬ್ಯಾಗ್‌ನಲ್ಲಿ ಮರೆಮಾಚಿ ಸಾಗಿಸುತ್ತಿದ್ದ. ಈ ವೇಳೆ ಅನುಮಾನಗೊಂಡು ಪರಿಶೀಲನೆ ನಡೆಸಿದಾಗ ಪ್ರಾಣಿಗಳು ಪತ್ತೆಯಾಗಿವೆ. ಆರೋಪಿಯು ಪ್ರಾಣಿಗಳನ್ನು ಬಾಕ್ಸ್‌ಗಳಲ್ಲಿ ತುಂಬಿಕೊಂಡು ದೊಡ್ಡ ಬ್ಯಾಗ್ನಲ್ಲಿಟ್ಟುಕೊಂಡು ಬಂದಿದ್ದ. ಸದ್ಯ ಕಸ್ಟಮ್ಸ್ ಅಧಿಕಾರಿಗಳು ಪ್ರಾಣಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ನೀಡಿದ್ದಾರೆ.
ಹೆಚ್ಚಿನ ವಿಚಾರಣೆಗೆ ಆರೋಪಿಯನ್ನು ಕಸ್ಟಮ್ಸ್ ಕಾಯ್ದೆಯ ಸೆಕ್ಷನ್ 104 ರ ಅಡಿಯಲ್ಲಿ ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗುತ್ತಿದೆ. ಆರೋಪಿಯು ತಮಿಳುನಾಡು ಮೂಲದ 32 ವರ್ಷ ವಯಸ್ಸಿನ ವ್ಯಕ್ತಿ ಎನ್ನಲಾಗಿದೆ.