DoubleClickMedia
ತಗ್ಗಿದ ಮಳೆ: ಚಿಕ್ಕಮಗಳೂರು ಪ್ರವಾಸಿತಾಣಗಳ ವೀಕ್ಷಣೆಗೆ ಅವಕಾಶ

ಚಿಕ್ಕಮಗಳೂರು, ಜು 31: ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಚಿಕ್ಕಮಗಳೂರು ಜಿಲ್ಲೆಯ ಹಲವು ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ತಾತ್ಕಲಿಕವಾಗಿ ನಿರ್ಬಂಧ ಹೇರಲಾಗಿತ್ತು. ಆದರೆ ಇದೀಗ ಮಳೆ ತಗ್ಗಿದ ಹಿನ್ನೆಲೆ ಮುಳ್ಳಯ್ಯನಗಿರಿ, ದತ್ತಪೀಠ ಸೀತಾಳಯ್ಯನಗಿರಿ, ಮಾಣಿಕ್ಯದಾರ, ಗಾಳಿಕೆರೆ ಸೇರಿದಂತೆ ಗಿರಿ ಪ್ರದೇಶದ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗಿದೆ.
ಭಾರೀ ಮಳೆ ಹಿನ್ನೆಲೆ ಕಳೆದ ಮೂರು ದಿನಗಳಿಂದ ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರಿ ಜಿಲ್ಲಾಡಳಿ ಆದೇಶ ಹೊರಡಿಸಿತ್ತು. ಮುಳ್ಳಯ್ಯನ ಗಿರಿ ಸಾಲಿನಲ್ಲಿ ಧರೆ ಕುಸಿತದಿಂದ ಕೈಮರ ಚೆಕ್ ಪೋಸ್ಟ್‌ನಲ್ಲಿ ಪ್ರವಾಸಿಗರನ್ನು ತಡೆದು ವಾಪಾಸ್ ಕಳುಹಿಸಲಾಗುತ್ತಿತ್ತು. ಇದೀಗ ಮಳೆ ಕಡಿಮೆಯಾದ ಹಿನ್ನೆಲೆ ಇಂದು 11 ಗಂಟೆಯಿಂದ ಪ್ರವಾಸಿಗರ ಪ್ರವೇಶಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದೆ.